ತೇನ್‍ಸಿಂಗ್ ನಾರ್ಗೆ
1914-1986. ಎವರೆಸ್ಟ್ ಶಿಖರವನ್ನು ನ್ಯೂಜೀóಲೆಂಡಿನ ಸರ್ ಎಡ್ಮಂಡ್ ಹಿಲೇರಿಯೊಂದಿಗೆ ಆರೋಹಣಗೈದ ಭಾರತೀಯ ವೀರ. ನೇಪಾಳದ ಈಶಾನ್ಯ ಭಾಗದಲ್ಲಿರುವ ಸೋಲೊ ಖುಂಬು ಜಿಲ್ಲೆಯ ಧಾಮಿ ಎಂಬ ಹಳ್ಳಿಯಲ್ಲಿ ರೆಂಜೊಮ್ ಮತ್ತು ಫಾಂಗ್ ಲಾ ಮಿಂಗ್ಮ್ ಎಂಬ ಷೆರ್ಪಾ ದಂಪತಿಗಳಿಗೆ ಹುಟ್ಟಿದ ಮಕ್ಕಳಲ್ಲಿ ಹನ್ನೊಂದನೆಯವ. ಬಾಲ್ಯದಿಂದಲೂ ಸಾಹಸಿ, ಕಷ್ಟ ಸಹಿಷ್ಣು ಮತ್ತು ಪರ್ವತಪ್ರಿಯ. 18ನೆಯ ವಯಸ್ಸಿನಲ್ಲಿ ಡಾರ್ಜಿಲಿಂಗಿಗೆ ವಲಸೆ ಹೋಗಿ ಅಲ್ಲಿ ಪರ್ವತಾರೋಹಣದ ಹೊರೆಯಾಳು ಕೆಲಸದಿಂದ ಜೀವಿಸತೊಡಗಿದ. 1935 ಮತ್ತು 1936ರಲ್ಲಿ ಎವರೆಸ್ಟ್ ಶಿಖರಾರೋಹಣ ಮಾಡಲು ಹೋಗುವವರೊಂದಿಗೆ ಹೊರೆಯಾಳಾಗಿ ಹೋದ. ಸ್ವಿಸ್ ಪರ್ವತಾರೋಹಿಗಳ ತಂಡ ವಿಸ್ ಡುನಾಂಟ್ ಎಂಬಾತನ ನಾಯಕತ್ವದಲ್ಲಿ ದಕ್ಷಿಣದ ಮಾರ್ಗವಾಗಿ ಎವರೆಸ್ಟ್ ಆರೋಹಣ ಮಾಡಲು ಆಗಮಿಸಿದಾಗ ಹೊರೆಯಾಳುಗಳ ಮುಖಂಡನಾಗಿದ್ದ. (ಅಲ್ಲಿ ಮುಖಂಡರನ್ನು ಸರ್ದಾರ್ ಎಂದು ಕರೆಯುತ್ತಾರೆ). ಆಗ ತಂಡದ ಇನ್ನೊಬ್ಬ ಸದಸ್ಯ ಲ್ಯಾಂಬರ್ಟನೊಂದಿಗೆ ಶಿಖರಾರೋಹಣ ಮಾಡಲು ನಡೆಸಿದ ಪ್ರಯತ್ನ ವಿಫಲವಾಯಿತು. ಆದರೂ ಈತ ತನ್ನ ಪ್ರಯತ್ನವನ್ನು ಕೈಬಿಡಲಿಲ್ಲ. ಬ್ರಿಟಿಷ್ ತಂಡವೊಂದು ಕರ್ನಲ್ ಜಾನ್ ಹಂಟನ ನಾಯಕತ್ವದಲ್ಲಿ ಎವರೆಸ್ಟ್ ಶಿಖರಾರೋಹಣ ಮಾಡಲು ಆಗಮಿಸಿತ್ತು (1953).  ಈ ತಂಡದಲ್ಲಿ ತೇನ್‍ಸಿಂಗ್ ಮತ್ತು ಎಡ್ಮಂಡ್ ಹಿಲೇರಿ ಸದಸ್ಯರಾಗಿದ್ದರು. ಶಿಖರವನ್ನೇರಲು ಇವರಿಬ್ಬರನ್ನೂ ಎರಡನೆಯ ಜೋಡಿಯೆಂದು ಆಯ್ಕೆ ಮಾಡಲಾಯಿತು. ಮೊದಲನೆ ಜೋಡಿಯ ಪ್ರಯತ್ನ ಪ್ರತಿಕೂಲ ಹವಾಮಾನದ ಕಾರಣದಿಂದ ವಿಫಲವಾದುದರಿಂದ ತೇನ್‍ಸಿಂಗ್ ಹಿಲರಿ ಜೋಡಿಗೆ ಶಿಖರವನ್ನೇರುವ ಸುವರ್ಣಾವಕಾಶ ಒದಗಿತು. 1953ರ ಮಾರ್ಚ್ 1ರಂದು ಹೊರಟ ಈ ಸಾಹಸಿಗಳಿಬ್ಬರೂ ವಿವಿಧ ಎತ್ತರಗಳಲ್ಲಿ ಶಿಬಿರಗಳನ್ನು ಹೂಡುತ್ತಾ ಅಂತಿಮವಾಗಿ ಮೇ 29ರಂದು ಮುಂಜಾನೆ 11-30 ಗಂಟೆಗೆ ಅತ್ಯುನ್ನತ ಶಿಖರ ಎವರೆಸ್ಟನ್ನು (29,028') ಏರಿ ನಿಂತ ವೀರರೆನಿಸಿದರು. 

(ನೋಡಿ- ಎವರೆಸ್ಟ್-ಶಿಖರಾರೋಹಣ)
ತೇನ್‍ಸಿಂಗನ ರೋಮಾಂಚಕಾರಿ ಆತ್ಮಕಥೆ "ಮ್ಯಾನ್ ಆಫ್ó ಎವರೆಸ್ಟ್" ಪ್ರಕಟವಾಗಿದ್ದು, ಕನ್ನಡಕ್ಕೂ ಅನುವಾದವಾಗಿದೆ.													(ಕೆ.ಎಂ.ಕೆ.ಆರ್.)
(ಪರಿಷ್ಕರಣೆ: ಬಿ.ವಿ. ಪ್ರಕಾಶ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ